ಇಂಗಾಲಸಂಯುಕ್ತಗಳಲ್ಲಿ ಅತಿ ಸರಳ ಸಂಯುಕ್ತಗಳೆಂದರೆ ಹೈಡ್ರೊಕಾರ್ಬನ್ನುಗಳು (ಜಲಜನಕೇಂಗಾಲ). ಇವು ಹೈಡ್ರೊಜನ್ ಮತ್ತು ಇಂಗಾಲ ಇವೆರಡೇ ಧಾತುಗಳು ಕೂಡಿ ಆಗಿವೆ. ಇವುಗಳಲ್ಲಿರುವ ಹೈಡ್ರೋಜನ್ನ ಒಂದು ಅಥವಾ ಹೆಚ್ಚು ಪರಮಾಣುಗಳು ಇತರ ಬಗೆಯ ಪುಂಜಗಳಿಂದ ಆದೇಶಿತವಾಗಿ ಇತರ ಬಗೆಯ ಇಂಗಾಲಸಂಯುಕ್ತಗಳ ಸೃಷ್ಟಿಯಾಗಿದೆಯೆಂದು ಭಾವಿಸಬಹುದು. ಈ ಬಗೆಯ ಹೊಸ ಸಂಯುಕ್ತಗಳ ರಾಸಾಯನಿಕ ಗುಣಲಕ್ಷಣಗಳು ಈ ಆದೇಶಿತ ಪುಂಜಗಳನ್ನು ಅವಲಂಬಿಸಿವೆ. ಈ ಸಂಯುಕ್ತಗಳು ಭಾಗವಹಿಸುವ ಕ್ರಿಯೆಗಳಿಗೆ ಅನುಗುಣವಾಗಿ ಸಂಯುಕ್ತಗಳನ್ನು ವರ್ಗೀಕರಿಸಲಾಗುವುದರಿಂದ ಈ ಲಕ್ಷಣಕಾರಣ ಪುಂಜಗಳನ್ನು ಕ್ರಿಯಾಪುಂಜಗಳೆಂದು ಕರೆಯಲಾಗುತ್ತದೆ. ಮೊದಲ ಬಗೆಯ ವರ್ಗೀಕರಣ ಅಣುಗಳ ಆಕಾರಗಳನ್ನು ಅವಲಂಬಿಸಿದೆ. ಆಕಾರಗಳೂ ಸಂಯುಕ್ತಗಳ ಲಕ್ಷಣಗಳ ಮೇಲೆ ಪ್ರಭಾವ ಬೀರುವುದರಿಂದ ಈ ಬಗೆಯ ವರ್ಗೀಕರಣ ಸಂಯುಕ್ತಗಳ ಅಭ್ಯಾಸಕ್ಕೆ ಅನುಕೂಲವಾಗಿದೆ. (ನೋಡಿ- ಆರೋಮ್ಯಾಟಿಕ್-ಸಂಯುಕ್ತಗಳು; ಆಲಿಫ್ಯಾಟಿಕ್-ಸಂಯುಕ್ತಗಳು; ಆಲಿಸೈಕ್ಲಿಕ್-ಸಂಯುಕ್ತಗಳು).